ಡೆಲ್‍ಕ್ಯಾಸೇ, ಟೇಯಾಫೀಲ್
1852-1923. ಫ್ರೆಂಚ್ ರಾಜನೀತಿಜ್ಞ. ಫ್ರಾನ್ಸ್ ದೇಶದ 3ನೆಯ ಗಣತಂತ್ರದ ವಿದೇಶಾಂಗ ವ್ಯವಹಾರಗಳನ್ನು ದಕ್ಷರೀತಿಯಲ್ಲಿ ನಿರ್ವಹಿಸಿದವ. 1852ರ ಮಾರ್ಚ್ 1 ರಂದು ಪಾಮ್ಯೇನಲ್ಲಿ ಜನಿಸಿದ. ಅಲ್ಲೇ ವಿದ್ಯಾಭ್ಯಾಸ ಮಾಡಿದ. ಲೇಯಾನ್ ಗ್ಯಾಂಬೆಟ ಮತ್ತು ಜೂಲ್ಸ್ ಫೆರಿಯ ಅನುಯಾಯಿಯಾಗಿ ರಾಜಕಾರಣವನ್ನು ಪ್ರವೇಶಿಸಿದ. 1885ರಲ್ಲಿ ನಡೆದ ಚುನಾವಣೆಗಳಲ್ಲಿ ಈತ ಸ್ಪರ್ಧಿಸಿದ. ಆದರೆ ಜೂಲ್ಸ್ ಫೆರಿಯ ವಸಾಹತುನೀತಿಯನ್ನು ಇವನು ಬೆಂಬಲಿಸಿದ್ದರಿಂದ ಇವನಿಗೆ ಸೋಲಾಯಿತು. 1889ರಲ್ಲಿ ತನ್ನ ಹುಟ್ಟೂರಿನ ವಿಭಾಗವಾದ ಆರೀಯೆಜ್‍ನಿಂದ ಪ್ರತಿನಿಧಿಯಾಗಿ ಆಯ್ಕೆಹೊಂದಿದ. 1887ರಲ್ಲಿ ಶ್ರೀಮಂತನೊಬ್ಬನ ವಿಧವೆಯನ್ನು ಮದುವೆಯಾದ್ದರಿಂದ ಇವನ ಆರ್ಥಿಕ ತೊಂದರೆಗಳು ಪರಿಹಾರವಾದುವು.

1893ರ ಜನವರಿಯಲ್ಲಿ ಅಲೆಕ್ಸಾಂಡರ್ ರೀಬೋನ ಸಂಪುಟದಲ್ಲಿ ವಸಾಹತುಗಳ ಅಧೀನ ಕಾರ್ಯದರ್ಶಿಯಾಗಿ ನೇಮಕಗೊಂಡು ಚಾಲ್ರ್ಸ್ ಡ್ಯೂಪ್ಯೂಯೀಯ ಸಂಪುಟದಲ್ಲಿ ಮುಂದುವರಿದ. ಮರುವರ್ಷ ಡ್ಯೂಪ್ಯೂಯಿ ಮತ್ತೆ ಸರ್ಕಾರ ರಚಿಸಿದಾಗ ಇವನು ವಸಾಹತುಗಳ ಮಂತ್ರಿಯಾದ. 1898ರಲ್ಲಿ ಬ್ರೀಸಾನನ ಮಂತ್ರಿಮಂಡಲದಲ್ಲಿ ವಿದೇಶಾಂಗ ವ್ಯವಹಾರಗಳ ಮಂತ್ರಿಯಾದ. ಇದು ಈತನ ಜೀವನದ ಪರಮೋತ್ಕರ್ಷದ ಕಾಲ. ಅನಂತರ ಬಂದ ಸರ್ಕಾರಗಳಲ್ಲೂ, 1905ರ ವರೆಗೆ, ಇವನು ಈ ಸ್ಥಾನದಲ್ಲಿ ಮುಂದುವರಿದ. ಈ ಕಾಲದಲ್ಲಿ ಇವನು ಫ್ರೆಂಚ್ ವಿದೇಶಾಂಗ ನೀತಿಯನ್ನು ಗಮನಾರ್ಹವಾಗಿ ರೂಪಿಸಿದ. 1893ರಲ್ಲಿ ಫ್ರಾನ್ಸು ರಷ್ಯದೊಂದಿಗೆ ಮೈತ್ರಿಯ ಒಪ್ಪಂದ ಮಾಡಿಕೊಂಡಿತ್ತು. ಆದರೆ 1882ರಲ್ಲಿ ಜರ್ಮನಿ, ಆಸ್ಟ್ರಿಯ-ಹಂಗರಿ ಮತ್ತು ಇಟಲಿಗಳ ನಡುವೆ ಮೈತ್ರಿ ಸ್ಥಾಪಿತವಾದಾಗಿನಿಂದ ಯೂರೋಪಿನಲ್ಲಿ ಫ್ರಾನ್ಸಿಗೆ ವಿರುದ್ಧವಾದ ರೀತಿಯ ರಾಜ ತಾಂತ್ರಿಕ ಶಕ್ತಿತೋಲ ಉಂಟಾಗಿತ್ತು. ಬದಲಾದ ಈ ಪರಿಸ್ಥಿತಿಯಲ್ಲಿ ಫ್ರಾನ್ಸ್ ಜರ್ಮನಿಯೊಂದಿಗೆ ಸೌಮನಸ್ಯ ಬೆಳಸಬೇಕೇ, ಇಲ್ಲವೇ ಬ್ರಿಟನಿನೊಂದಿಗೆ ಮೈತ್ರಿಯ ನೀತಿ ಅನುಸರಿಸಬೇಕೇ? - ಎಂಬ ವಿಚಾರದಲ್ಲಿ ವಿಭಿನ್ನ ಅಭಿಪ್ರಾಯಗಳಿದ್ದುವು. ಜರ್ಮನಿಯ ಬಲವನ್ನೆದುರಿಸಬೇಕೆಂದೂ ಬ್ರಿಟನಿನೊಡನೆ ಸ್ನೇಹ ಬೆಳಸಬೇಕೆಂದೂ ಡೆಲ್‍ಕ್ಯಾಸೇ ತೀರ್ಮಾನಿಸಿ ಆ ನೀತಿ ಅನುಸರಿಸಿದ. ಈ ಹಾದಿಯಲ್ಲಿ ಅನೇಕ ಅಡಚಣೆಗಳೂ ಅಪಾಯಗಳೂ ಇದ್ದುವಾದರೂ ಡೆಲ್‍ಕ್ಯಾಸೇ ಎದೆಗುಂದಲಿಲ್ಲ. ವಸಾಹತುಗಳಿಗೆ ಸಂಬಂಧಿಸಿದಂತೆ ಫ್ರಾನ್ಸ್ ಬ್ರಿಟನ್‍ಗಳ ನಡುವೆ ಭಿನ್ನಾಭಿಪ್ರಾಯ ತಲೆದೋರುವ ಅಪಾಯವಿತ್ತು. ಡೆಲ್‍ಕ್ಯಾಸೇ ಇದನ್ನು ಕೌಶಲದಿಂದ ನಿವಾರಿಸಿದ. 1904ರಲ್ಲಿ ಜಪಾನ್ ಮತ್ತು ರಷ್ಯಗಳ ನಡುವೆ ಯುದ್ಧ ಆರಂಭವಾದಾಗ ಪರಿಸ್ಥಿತಿ ಗಂಭೀರವಾಯಿತು. ಬ್ರಿಟನ್ ಜಪಾನಿನ ಮಿತ್ರರಾಷ್ಟ್ರವಾಗಿತ್ತು. ಆದರೆ ಫ್ರಾನ್ಸ್ ರಷ್ಯಗಳಲ್ಲಿ ಮೈತ್ರಿಯಿತ್ತು. ಈಜಿಪ್ಟ್ ಮತ್ತು ಮೊರಾಕೋ ಪ್ರಶ್ನೆಗಳ ವಿಚಾರದಲ್ಲೂ ಫ್ರಾನ್ಸ್ ಮತ್ತು ಬ್ರಿಟನ್‍ಗಳ ನಡುವೆ ವಿರಸ ಬೆಳೆಯುವ ಸಂಭವವಿತ್ತು. ಡೆಲ್‍ಕ್ಯಾಸೇ ತುಂಬ ಸಹನೆಯಿಂದ ಲಂಡನಿನಲ್ಲಿದ್ದ ಫ್ರೆಂಚ್ ರಾಯಭಾರಿಯ ಮೂಲಕ ಸಂಧಾನ ಬೆಳೆಸಿದ. 1904ರ ಏಪ್ರಿಲ್‍ನಲ್ಲಿ ಫ್ರಾನ್ಸ್-ಬ್ರಿಟನ್‍ಗಳ ನಡುವೆ ಆದ ಒಡಂಬಡಿಕೆ ಅತ್ಯಂತ ಗಮನಾರ್ಹ. ಇದು ಯೂರೋಪಿನ ಇತಿಹಾಸದಲ್ಲಿ ಹೊಸದೊಂದು ಮೈತ್ರೀಭಾವಕ್ಕೆ ತಳಹದಿ ಹಾಕಿತು. ಉತ್ತರ ಸಮುದ್ರದ ಡಾಗರ್ ತಿಟ್ಟಿನಲ್ಲಿ ರಷ್ಯನ್ ಯುದ್ಧನೌಕೆಗಳು ಬ್ರಿಟಿಷ್ ಬಲೆದೋಣಿಗಳ ಮೇಲೆ ಗುಂಡುಹಾರಿಸಿದಾಗ (1904) ಇವೆರಡು ದೇಶಗಳ ನಡುವೆ ಸಂಧಾನ ನಡೆಸಿದ. 1907ರಲ್ಲಿ ಸಾಧ್ಯವಾದ ಬ್ರಿಟನ್, ಫ್ರಾನ್ಸ್, ರಷ್ಯಗಳ ತ್ರಿರಾಷ್ಟ್ರಮೈತ್ರಿಗೆ ಇದು ಹಾದಿಮಾಡಿಕೊಟ್ಟಿತು.

ಆದರೆ ಆಂತರಿಕವಾಗಿ ಅವನ ನೀತಿಗಳಿಗೆ ವಿರೋಧ ಬೆಳೆಯುತ್ತಿತ್ತು. ಬೆಳೆಯುತ್ತಿದ್ದ ಜರ್ಮನ್ ಶಕ್ತಿಗೆ ಹೆದರಿದ ಹಲವು ರಾಜಕಾರಣಿಗಳು ಅದರೊಂದಿಗೆ ಸ್ನೇಹ ಬೆಳೆಸಲು ಕಾತರರಾದರು. ಡೆಲ್‍ಕ್ಯಾಸೆಯ ಬೆನ್ನಹಿಂದೆ ಅದಕ್ಕಾಗಿ ಯತ್ನ ನಡೆಸಿದರು. ಕೊನೆಗೆ 1905ರಲ್ಲಿ ಡೆಲ್‍ಕ್ಯಾಸೇ ಮಂತ್ರಿಪದವಿಗೆ ರಾಜೀನಾಮೆ ನೀಡಿದ. ಅನಂತರ ಆರು ವರ್ಷಗಳ ಕಾಲ ಅವನು ಯಾವ ಅಧಿಕಾರದಲ್ಲೂ ಇರಲಿಲ್ಲ. ಎರಡು ವರ್ಷ ರಾಜಕೀಯ ವಿಚಾರಗಳಲ್ಲಿ ಮೌನ ತಳೆದಿದ್ದ. 1908ರಲ್ಲಿ ಮೊರಾಕೊ ಕುರಿತ ಚರ್ಚೆಯಲ್ಲಿ ಸಂಸತ್ತಿನಲ್ಲಿ ಇವನು ತನ್ನ ನೀತಿಯನ್ನು ಸಮರ್ಥಿಸಿ ಮಾತನಾಡಿದಾಗ ಅನೇಕರು ಅವನನ್ನು ಮೆಚ್ಚಿದರು. ಮತ್ತೆ ಅವನಿಗೆ ಪ್ರಾಧಾನ್ಯ ಬಂತು. ಫ್ರೆಂಚ್ ನೌಕಾ ದೌರ್ಬಲ್ಯದ ಬಗ್ಗೆ ವಿಚಾರಣೆ ನಡೆಸಿ ವರದಿ ಒಪ್ಪಿಸಲು ನೇಮಕವಾದ ಸಂಸದೀಯ ಸಮಿತಿಗೆ ಆತ ಅಧ್ಯಕ್ಷನಾದ (1909). ಆ ಸಮಿತಿ ನೀಡಿದ ವರದಿಯ ಫಲವಾಗಿ µóÁµóರ್ï ಕ್ಲೇಮಾನ್ಸೋನ ಸರ್ಕಾರ ಉರುಳಿಬಿತ್ತು. 1911ರಲ್ಲಿ ಎರ್ನೆಸ್ಟ್ ಮಾನೀಸನ ಸಂಪುಟದಲ್ಲಿ ಅವನು ನೌಕಾಮಂತ್ರಿಯಾದ. ಅನಂತರ ಬಂದ ಸರ್ಕಾರಗಳಲ್ಲೂ-ಒಟ್ಟು ಎರಡು ವರ್ಷ-ಮುಂದುವರಿದ. 1914ರಲ್ಲಿ ಒಂದನೆಯ ಮಹಾಯುದ್ಧ ಪ್ರಾರಂಭವಾಗುವ ವೇಳೆಗೆ ಬ್ರಿಟನ್ ಫ್ರಾನ್ಸ್‍ಗಳ ಮೈತ್ರಿ ಬೆಳೆಯಲು ಡೆಲ್‍ಕ್ಯಾಸೆಯ ಪ್ರಯತ್ನವೇ ಕಾರಣ. 1914ರಲ್ಲಿ ಅಲೆಕ್ಸಾಂಡರ್ ರೀಬೋನ ಸಂಪುಟದಲ್ಲಿ ಯುದ್ಧಮಂತ್ರಿಯಾಗಿಯೂ ವೀವ್ಯಾಯಾನೀಯ ಸಂಪುಟದಲ್ಲಿ ವಿದೇಶಾಂಗ ಮಂತ್ರಿಯಾಗಿಯೂ ಇದ್ದ. ಆ ವೇಳೆಗೆ ಅವನ ಸಾಮಥ್ರ್ಯ ಕಡಿಮೆಯಾಗಿತ್ತು. ಅವನ ನೀತಿ ನಿಲುವುಗಳಲ್ಲಿ ವಿರೋಧಾಭಾಸಗಳು ತಲೆದೋರಿದ್ದುವು. 1915ರಲ್ಲಿ ಭಿನ್ನಾಭಿಪ್ರಾಯದಿಂದಾಗಿ ಅವನು ರಾಜೀನಾಮೆ ನೀಡಿದ. 1916ರಲ್ಲಿ ರಾಜಕಾರಣದಿಂದ ನಿವೃತ್ತಿ ಹೊಂದಿದ. ಆದರೂ 1918 ಮತ್ತು 1919ರಲ್ಲಿ ಬ್ರಿಟಷ್ ಮತ್ತು ಫ್ರೆಂಚ್ ಸರ್ಕಾರಗಳು ಅನುಸರಿಸಿದ ಧೋರಣೆಗಳು ಅವನ ಟೀಕೆಗೆ ಗುರಿಯಾದುವು. ಫ್ರೆಂಚ್-ಬ್ರಿಟಿಷ್ ಮೈತ್ರಿಯನ್ನು ಉಳಿಸಿಕೊಂಡು ಬರಬೇಕೆಂಬುದು ಅವನ ಇಚ್ಛೆಯಾಗಿತ್ತು. ತನ್ನ ಅಧಿಕಾರದ ಅಂತಿಮಕಾಲದಲ್ಲಿ ಅವನು ಹೆಚ್ಚಿನ ಯಶಸ್ಸು ಗಳಿಸಲಿಲ್ಲವಾದರೂ ಫ್ರಾನ್ಸಿನ ಅಗ್ರಶ್ರೇಣಿಯ ವಿದೇಶಾಂಗ ಮಂತ್ರಿಗಳಲ್ಲಿ ಅವನಿಗೂ ಸ್ಥಾನವಿದೆ. ಡೆಲ್‍ಕ್ಯಾಸೇ 1923ರ ಫೆಬ್ರುವರಿ 21 ರಂದು ತೀರಿಕೊಂಡ.				(ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ